ರಾಜಮಹೇಂದ್ರಿ
ಭಾರತದ ಆಂಧ್ರ ಪ್ರದೇಶ ರಾಜ್ಯದ ಪೂರ್ವ ಗೋದಾವರಿ ಜಿಲ್ಲೆಯ ಒಂದು ಪಟ್ಟಣ. ಕಾಕಿನಾಡ ಬಂದರಿಗೆ  ಪಶ್ಚಿಮದಲ್ಲಿ 66 ಕಿ.ಮೀ ದೂರದಲ್ಲಿ ಗೋದಾವರಿ ನದಿಯ ಎಡದಂಡೆಯ ಮೇಲಿದೆ.  ಜನಸಂಖ್ಯೆ 403781 (1991). ಈ ಪಟ್ಟಣ ಚೆನ್ನೈನಿಂದ (ಹಿಂದಿನ ಮದರಾಸು) ಕಲ್ಕತ್ತ ರೈಲುಮಾರ್ಗದ ಒಂದು ಮುಖ್ಯ ರೈಲು ನಿಲ್ದಾಣ. ಇದು ಚೆನ್ನೈನ ಉತ್ತರಕ್ಕೆ ಸು. 594 ಕಿ.ಮೀ. ದೂರದಲ್ಲಿದೆ. ಇಲ್ಲಿ ಗೋದಾವರಿ ನದಿಗೆ ಕಟ್ಟಿರುವ ಸೇತುವೆ ಸು. 3 ಕಿ.ಮೀ ಉದ್ದವಿದ್ದು ಭಾರತದ ಅತ್ಯಂತ ಉದ್ದವಾದ ರೈಲು ಸೇತುವೆಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಆಧುನಿಕವಾದ ಒಂದು ಹೊಸ ಸೇತುವೆಯನ್ನೂ ನಿರ್ಮಿಸಲಾಗಿದೆ. ಪಟ್ಟಣದಲ್ಲಿ ಆಂಧ್ರ ಮಹಿಳಾ ಸಂಸ್ಕøತ ಕಾಲೇಜು ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿವೆ. ನೂರು ವರ್ಷಕ್ಕೂ ಮೇಲಾಗಿರುವ  ಸರ್ಕಾರಿ ಕಾಲೇಜು ಇದೆ. ತೆಲಗು ವಿಶ್ವವಿದ್ಯಾಲಯದ ಒಂದು ಶಾಖೆಯಾಗಿ ಸಾಹಿತ್ಯ ಪೀಠವಿದೆ. ಕೇಂದ್ರ ಹೊಗೆಸೊಪ್ಪು ಸಂಶೋಧನಾಲಯ, ಸರ್ ಆರ್ಥರ್ ಕಾಟನ್ ವಸ್ತುಸಂಗ್ರಹಾಲಯವಿದೆ. ಉತ್ತಮ ರಸ್ತೆ, ಸಂಚಾರ ಮಾರ್ಗಗಳು ಆಸ್ಪತ್ರೆ ಸೌಲಭ್ಯಗಳಿವೆ. ಈ ಪಟ್ಟಣ ಅಕ್ಕಿ, ಉಪ್ಪು, ಮರದ ದಿಮ್ಮಿಗಳ ಮಾರಾಟದ ಒಂದು ಮುಖ್ಯ ಕೇಂದ್ರವಾಗಿದೆ. ಕಾಗದ ಕಾರ್ಖಾನೆ ಮುಂತಾದವುಗಳಿವೆ. ಮೀನುಗಾರಿಕೆಯೂ ಸ್ವಲ್ಪಮಟ್ಟಿಗೆ ಇದೆ.

11ನೆಯ ಶತಮಾನದಲ್ಲಿ ಆಳಿದ ಚಾಳುಕ್ಯ ದೊರೆ ರಾಜರಾಜ ನರೇಂದ್ರನ ಆಸ್ಥಾನದಲ್ಲಿದ್ದ ನನ್ನಯ ತೆಲುಗಿನ ಮೊತ್ತಮೊದಲ ಲಭ್ಯ ಕೃತಿ ಆಂಧ್ರ ಮಹಾಭಾರತವನ್ನು ರಚಿಸಿದ್ದಾನೆ. ಸು. 1325ರಲ್ಲಿ ಆಂಧ್ರದಲ್ಲಿ ಕಾಕತೀಯ ಸಾಮ್ರಾಜ್ಯದ ಪತನಾನಂತರ ಆಂಧ್ರ ಐದು ರಾಜ್ಯಗಳಾಗಿ ವಿಭಾಗವಾಯಿತು. ಅದರಲ್ಲಿ ರಾಜಮಹೇಂದ್ರಿಯು ರೆಡ್ಡಿ ರಾಜ್ಯವೂ ಒಂದು. 1449ರಲ್ಲಿ ಒರಿಸ್ಸದ  ರಾಜ ಕಪಿಲೇಶ್ವರ ಇದನ್ನು ವಶಪಡಿಸಿಕೊಂಡ. 1572ರಲ್ಲಿ ಮುಸ್ಲಿಂ ಆಡಳಿತಕ್ಕೆ ಒಳಪಟ್ಟಿತು. 1753ರಲ್ಲಿ ಫ್ರೆಂಚರು  ಈ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡರು. 1758ರಲ್ಲಿ ರಾಜಮಹೇಂದ್ರಿ ಬ್ರಿಟಿಷರ ಆಡಳಿತಕ್ಕೆ ಸೇರಿತು. ಮುಂದೆ ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಮತ್ತು ಆಂಧ್ರ ಪ್ರದೇಶದ ರಚನೆಯಾದ ಬಳಿಕ ಗೋದಾವರಿ ಜಿಲ್ಲೆಯ ಒಂದು ವಾಣಿಜ್ಯ ನಗರವಾಗಿ ಮತ್ತು ಆಂಧ್ರದ ಸಾಂಸ್ಕøತಿಕ ಕೇಂದ್ರವಾಗಿ ಬೆಳೆಯುತ್ತಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ